ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ।।
ಎಂತಹ ಅದ್ಭುತ ವರ್ಣನೆ ಅಲ್ಲವೆ? ಈ ವರ್ಣನೆ ಕೇವಲ ಪ್ರಸಿದ್ಧ ಜೋಗ ಜಲಪಾತಕ್ಕಷ್ಟೇ ಸೀಮಿತ ಎಂದುಕೊಳ್ಳಬೇಡಿ. ಜೋಗದಷ್ಟೇ ನಯನಮನೋಹರವಾದ ಮತ್ತಷ್ಟು ಹತ್ತು ಹಲವು ಜಲಪಾತಗಳು ನಮ್ಮ ರಾಜ್ಯದಾದ್ಯಂತ ತುಂಬಿವೆ. ಅಂತಹುದೇ ಅದ್ಭುತಗಳಲ್ಲಿ ಮಲ್ಲಳ್ಳಿ ಜಲಪಾತವೂ ಒಂದು. ಬನ್ನಿ ಇದರ ಅನುಭವವನ್ನು ಸವಿಯೋಣ.
ನಾನು ಹಲವಾರು ವಿಡಿಯೋಗಳಲ್ಲಿ ಮಲ್ಲಳ್ಳಿ ಜಲಪಾತವನ್ನು ನೋಡಿ ಅದರ ಭೋರ್ಗರೆತಕ್ಕೆ ಮಾರು ಹೋಗಿ ಈ ಸ್ಥಳಕ್ಕೆ ಭೇಟಿ ನೀಡಬೇಕೆಂದು ಹಲವಾರು ದಿನಗಳಿಂದ ಎಂದುಕೊಳ್ಳುತ್ತಿದ್ದೆ. ಆಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ್ಯ ದಿವಸದ ವಾರಾಂತ್ಯದ ಸಮಯದಲ್ಲಿ ಇಲ್ಲಿಗೆ ತೆರಳಲು ಅಚಾನಕ್ಕಾಗಿ ನಿರ್ಧರಿಸಿದೆವು. ಮಲ್ಲಳ್ಳಿ ಜಲಪಾತವು ರಾಜಧಾನಿಯಿಂದ ೨೫೦ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಅರಕಲಗೂಡು ಮಾರ್ಗವಾಗಿ ತೆರಳಿ ಅಲ್ಲಿಂದ ಶನಿವಾರಸಂತೆ ಮಾರ್ಗದಲ್ಲಿ ಸಾಗಬೇಕು. ಗೂಗಲ್ ಮ್ಯಾಪ್ಸ್ ನಲ್ಲಿ ಹುಡುಕಿದರೆ ನಿಮಗೆ ಎರಡು ಮಾರ್ಗಗಳು ದೊರೆಯುತ್ತದೆ. ಆದರೆ ನಿಮಗೆ ಅನುಮಾನವಾದಲ್ಲಿ ಸ್ಥಳೀಯರನ್ನು ವಿಚಾರಿಸುವುದು ಉತ್ತಮ. ಶನಿವಾರಸಂತೆಯಿಂದ ಮುಂದೆ ಹೋದಾಗ ನಮಗೆ ಸ್ವಲ್ಪ ಅನುಮಾನವಾಯಿತು. ಸ್ವಲ್ಪ ಮುಂದುವರಿಯಲು ರಸ್ತೆಯು ಕವಲು ಒಡೆಯಿತು. ಒಂದು ದಿಕ್ಕಿನಲ್ಲಿ ರಮಣೀಯ ಬಿಸ್ಲೆ ಘಟ್ಟಸಾಲು ಇನ್ನೊಂದು ದಿಕ್ಕಿನಲ್ಲಿ ಸೋಮವಾರಪೇಟೆ ಕಡೆ ರಸ್ತೆ ಸಾಗುತ್ತಿತ್ತು. ನಾವು ಸ್ಥಳೀಯರನ್ನು ವಿಚಾರಿಸಿದಾಗ ಅವರು ಎರಡು ಮಾರ್ಗಗಳಲ್ಲಿ ತೆರಳಬಹುದು ಎಂದು ತಿಳಿಸಿ ಅದರಲ್ಲಿ ಎಡಕ್ಕೆ ಚಲಿಸಲು ಸೂಚಿಸಿದರು. ಅಬ್ಬಾ!! ಎಂತಹ ಅದ್ಭುತ ಅನುಭವ. ರಸ್ತೆಯುದ್ದಕ್ಕೂ ನಿತ್ಯ ಹರಿದ್ವರ್ಣದ ಕಾಡುಗಳ ಚಪ್ಪರ ನಮ್ಮನ್ನು ಕಾಯುತ್ತಿತ್ತು. ಹಾಗೆಯೇ ಹಲವಾರು ಸಣ್ಣ ಪುಟ್ಟ ಝರಿಗಳು ಕಾಣಸಿಗುತ್ತಿದ್ದವು. ನಾವು ಒಂದು ಕಡೆ ಕಾರನ್ನು ನಿಲ್ಲಿಸಿ ಮುಖ ತೊಳೆದುಕೊಳ್ಳಲು ನಿಲ್ಲಿಸಿದೆವು. ಎಂತಹ ತಂಪು ನೀರು. ಅದರ ರುಚಿ ಸವಿದವನೇ ಬಲ್ಲ. ಪಶ್ಚಿಮ ಘಟ್ಟಗಳ ನೈಸರ್ಗಿಕ ಖನಿಜಗಳ ಸಂಪತ್ತನ್ನು ತನ್ನಲ್ಲಿ ತುಂಬಿಕೊಂಡು ಬಾಯಾರಿದವರ ದಾಹವನ್ನು ತೀರಿಸಿ ಒಂದು ಉತ್ಸಾಹವನ್ನು ತುಂಬುತ್ತವೆ. ನಾವು ಈ ಝರಿಯಿಂದ ಆಯಾಸವನ್ನು ಪರಿಹರಿಸಿಕೊಂಡು ಮುಂದೆ ಸಾಗಿದೆವು. ತಂಪಾದ ವಾತಾವರಣವು ನಮ್ಮಲ್ಲಿ ಹೊಸ ಚೈತನ್ಯ ತುಂಬಿತು. ಕಡಿದಾದ ರಸ್ತೆಗಳು, ಹಚ್ಚ ಹಸುರಿನ ಗಿಡಮರಗಳು ನಮ್ಮಲ್ಲಿ ಒಂದು ಕೌತುಕತೆಯನ್ನು ಹುಟ್ಟಿಸಿದವು. ಈ ಪ್ರದೇಶದಲ್ಲಿ ಆನೆಗಳ ಹಾವಳಿ ಇರುವುದರಿಂದ ಸುತ್ತಮುತ್ತಲಿನ ಎಸ್ಟೇಟಿನ ಕಾವಲುಗಾರರು ಬಂದೂಕನ್ನು ಹಿಡಿದುಕೊಂಡಿದ್ದನ್ನು ಕಂಡು ಒಂದು ಕ್ಷಣ ಗಾಬರಿಯಾಯಿತು. ನಂತರ ಅವರಲ್ಲಿ ನಾವು ಸಾಗುತ್ತಿರುವ ದಾರಿ ಸರಿಯಿದೆಯೇ ಎಂದು ಕೇಳಿ ನಮ್ಮ ಅನುಮಾನ ಪರಿಹರಿಸಿಕೊಂಡೆವು. ಹಾಗೆ ಮುಂದೆ ಸಾಗುತ್ತಿರುವಾಗ ಕುಂದಳ್ಳಿ ಎಂಬ ಹಳ್ಳಿಯಲ್ಲಿ ನಮಗೆ ಒಂದು ತಿರುವು ಕಾಣಿಸಿತು. ಪುಷ್ಪಗಿರಿ ಬೆಟ್ಟ ಹಾಗೂ ಮಲ್ಲಳ್ಳಿ ಜಲಪಾತ ತಲುಪಲು ಈ ದಾರಿಯಲ್ಲಿ ಸಾಗಿದೆವು. ಅಂತೂ ಇಂತೂ ನಾವು ಮಲ್ಲಳ್ಳಿಗೆ ತಲುಪಿದೆವು.
ಝರಿ |
ಬೆಟ್ಟಸಾಲು |
ಮಾರ್ಗಸೂಚಿ |
ಜಲಪಾತದ ಸಮೀಪದ ಮಾರ್ಗಸೂಚಿ |
ಪೋಲೀಸರ ಸೂಚನಾ ಫಲಕ |
ಮತ್ತಷ್ಟು ಮಾಹಿತಿ |
ಅಲ್ಲಿ ಮೂಲಭೂತ ಸೌಕರ್ಯಗಳು ಏನೂ ದೊರೆಯುವುದಿಲ್ಲ. ಸರ್ಕಾರದಿಂದ ಯಾವುದೇ ಅನುದಾನವಾಗಲೀ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಪ್ರಯತ್ನಗಳು ಆಗಿರುವ ಸೂಚನೆ ಕಾಣಲಿಲ್ಲ. ಆದರೆ ಕೆಲವು ಸ್ಥಳೀಯರ ಸಹಾಯದಿಂದ ಬಂದಿರುವ ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗಿತ್ತು. ಹಾಗೆಯೆ ಕೆಲವು ಅರಣ್ಯ ಸಿಬ್ಬಂದಿ ಹಾಗು ಪೊಲೀಸರು ಭದ್ರತೆಗಾಗಿ ಅಲ್ಲಿ ಕುಳಿತಿರುವುದನ್ನು ಕಂಡು ಸ್ವಲ್ಪ ಸಮಾಧಾನವಾಯಿತು. ಆದರೆ ವಾಹನ ನಿಲುಗಡೆಯ ಶುಲ್ಕವನ್ನು ನೋಡಿ ದಿಗ್ಭ್ರಾಂತಿಯಾಯಿತು. ಒಂದು ಕಾರಿಗೆ ೨೦೦ರೂ ಶುಲ್ಕವನ್ನು ವಸೂಲಿ ಮಾಡುತ್ತಿದ್ದರು. ಮಳೆಯ ಸೂಚನೆ ಇದ್ದಿದ್ದರಿಂದ ನಾವು ಕಾರನ್ನು ನಿಲ್ಲಿಸಿ ನಮ್ಮ ಛತ್ರಿಗಳನ್ನು ತೆಗೆದುಕೊಂಡು ಜಲಪಾತದ ಕಡೆಗೆ ಹೆಜ್ಜೆ ಹಾಕಿದೆವು. ಜಲಪಾತವನ್ನು ಕಾಣಲು ರೋಮಾಂಚನಕಾರಿ ಅನುಭವವಾಯಿತು. ದಟ್ಟ ಹಸಿರಿನ ಮಧ್ಯೆ ಹಾಲಿನಂತೆ ಬೆಳ್ಳಗಿನ ಭೋರ್ಗರೆವ ಜಲಧಾರೆ ನಮ್ಮ ಕಣ್ಣುಗಳಿಗೆ ಮುದ ನೀಡುವುದರೊಂದಿಗೆ ಅದರ ಆರ್ಭಟದ ಶಬ್ದವು ನಮ್ಮ ಕಿವಿಯಲ್ಲಿ ತುಂಬಿಕೊಂಡವು. ಕುಮಾರಧಾರ ನದಿಯು ಪುಷ್ಪಗಿರಿ ಬೆಟ್ಟ ಸಾಲಿನಲ್ಲಿ ಹುಟ್ಟಿ ಈ ಪ್ರದೇಶದಲ್ಲಿ ಧುಮುಕುತ್ತಿರುವ ದೃಶ್ಯವನ್ನು ಕಂಡಾಗ ನನಗೆ ಡಾ. ರಾಜಕುಮಾರ ಅಭಿನಯದ ಜೀವನ ಚೈತ್ರ ಚಿತ್ರದ ನಾದಮಯ ಹಾಡು ನೆನಪಾಯಿತು.
ನಾದಮಯ ಈ ಲೋಕವೆಲ್ಲ
ಕೊಳಲಿಂದ ಗೋವಿಂದ ಆನಂದಗೊಂಡಿರಲು
ನದಿಯ ನೀರು ಮುಗಿಲ ಸಾಲು ಮುರಳಿಯ
ಸ್ವರದಿ ಬೆರೆತು ಚಾಲನೆ ಮರೆತು ನಿಂತಿರಲು ।।
ಅಲ್ಲಿ ನದಿಯ ನೀರು ಚಲನೆ ಮರೆತು ನಿಂತಿರಲು ಇಲ್ಲಿ ನಾನು ಅದರ ಸೌಂದರ್ಯಕ್ಕೆ ಮಾರು ಹೋಗಿ ಚಲನೆ ಮರೆತು ಮೈ ಮರೆತು ನಿಂತೆ. ನಂತರ ನನ್ನ ಪತ್ನಿಯು ಅದರ ಹತ್ತಿರ ಹೋಗಲು ಸುಮಾರು ೫೦೦ ಮೆಟ್ಟಿಲುಗಳನ್ನು ಇಳಿಯಬೇಕೆಂದು ನೆನಪಿಸಿದಳು. ನಾವು ಬೇಗ ಬೇಗನೆ ಇಳಿದು ಹತ್ತಿರ ಸಾಗಿದೆವು. ಈ ಜಲಪಾತವು ಎರಡು ಹಂತಗಳಲ್ಲಿ ಧುಮುಕಿ ತನ್ನ ಹರಿವನ್ನು ಮುಂದುವರೆಸುತ್ತದೆ. ಹತ್ತಿರ ಸಾಗಿದಷ್ಟು ನೀರಿನ ಜಿಗಿತದಿಂದ ಉಂಟಾದ ರಭಸದಿಂದ ನೀರಿನ ಹನಿಗಳು ನಮ್ಮ ಮೇಲೆ ಹಾರುತ್ತಿದ್ದವು. ಇದೊಂದು ರೋಚಕ ಅನುಭವ. ನಂತರ ನಾವು ಸ್ವಲ್ಪ ಕಠಿಣ ಪ್ರಯತ್ನದಿಂದ ವೇಗವಾಗಿ ವಾಹನ ನಿಲ್ದಾಣದ ಕಡೆ ಸಾಗಿದೆವು.
ಮೇಲಿನಿಂದ ಕಾಣುವ ದೃಶ್ಯ |
ಎರಡು ಹಂತದಲ್ಲಿ ಧುಮುಕುವ ಜಲಪಾತ |
ಮತ್ತೊಂದು ದೃಶ್ಯ |
ಮಗದೊಂದು ದೃಶ್ಯ |
ವಾಹನ ನಿಲ್ದಾಣದ ಸಮೀಪದಲ್ಲಿ ಒಬ್ಬ ಸ್ಥಳಿಯನು ಚಹಾ ಮಾರುತ್ತಿದ್ದನು. ಅದರ ಜೊತೆ ಚಟ್ಪಟ್ ಚುರಮುರಿ ಕೂಡ ಕೊಡುತ್ತಿದ್ದನು. ನಾವು ಅದನ್ನು ಸವಿದು ನಮ್ಮ ಪ್ರಯಾಣವನ್ನು ರಾಮನಾಥಪುರದ ಕಡೆಗೆ ಮುಂದುವರೆಸಿದವು. ಸೋಮವಾರಪೇಟೆ ಮೂಲಕ ಸಾಗಿ ಅಲ್ಲಿಂದ ಸ್ಥಳೀಯರ ಹಾಗು ಗೂಗಲ್ನ ಸಹಾಯದಿಂದ ರಾಮನಾಥಪುರವನ್ನು ತಲುಪಿದೆವು. ರಾಮನಾಥಪುರವು ಕಾವೇರಿ ನದಿ ತೀರ. ಅಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅತಿಥಿ ನಿವಾಸಗಳು ದೊರೆಯುತ್ತವೆ. ಅಲ್ಲಿ ನಾವು ಒಂದು ರಾತ್ರಿ ತಂಗಿ ಮಾರನೇ ದಿನ ದಕ್ಷಿಣ ಕಾಶಿ ರಾಮೇಶ್ವರನ ದರ್ಶನ ಪಡೆದುಕೊಂಡು ಸ್ವಾಮಿ ಸುಬ್ರಹ್ಮಣ್ಯನ ಅನುಗ್ರಹ ಪಡೆದುಕೊಂಡು ಬೆಂಗಳೂರಿಗೆ ಮರಳಿದೆವು. ರಾಮನಾಥಪುರದ ವೈಶಿಷ್ಟ್ಯವನ್ನು ತಿಳಿಯಲು ವಿಕಿಪೀಡಿಯದಲ್ಲಿ ಹುಡುಕಿ. ಬಹಳ ಮಹಿಮೆಯಿಂದ ಕೂಡಿರುವ ಜಾಗವದು. ಅದರ ಸಮೀಪದಲ್ಲಿಯೇ ರುದ್ರಪಟ್ಟಣ ಎಂಬ ಗ್ರಾಮವಿದೆ. ಅದು ಸಂಗೀತ ಗ್ರಾಮವೆಂದೇ ಪ್ರಸಿದ್ಧಿ. ನೀವು ಮಲ್ಲಳ್ಳಿಗೆ ಹೋಗುವಾಗ ಇವುಗಳನ್ನು ನಿಮ್ಮ ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.
ಕಾವೇರಿ ನದಿ |
ರುದ್ರಪಟ್ಟಣ |
ಸೂಚನೆಗಳು:
- ಬೆಂಗಳೂರಿನಿಂದ ಮಲ್ಲಳ್ಳಿಗೆ ಹಲವಾರು ಮಾರ್ಗಗಳಿವೆ. ನಿಮಗೆ ಸೂಕ್ತವಾದುದನ್ನು ಆಯ್ದುಕೊಳ್ಳಿ
- ಬೆಂಗಳೂರಿನಿಂದ ಸಾಗುವಾಗ ಹಲವಾರು ಉತ್ತಮ ಹೋಟೆಲ್ಗಳು ಸಿಗುತ್ತವೆ. ಅಲ್ಲಿ ಆಹಾರವನ್ನು ತೆಗೆದುಕೊಳ್ಳಬಹುದು
- ಅರಕಲಗೂಡು ದಾಟಿದ ನಂತರ ಉತ್ತಮ ಹೋಟೆಲ್ಗಳು ಸಿಗದೇ ಇರಬಹುದು. ಆದ್ದರಿಂದ ನೀರು ಹಾಗು ಬಿಸ್ಕತ್ತುಗಳನ್ನು ತೆಗೆದುಕೊಂಡು ಹೋಗುವುದು ಒಳಿತು
- ಈ ಪ್ರದೇಶವು ಸ್ವಲ್ಪ ನಿರ್ಜನವಾಗಿರುತ್ತದೆ. ಆದ್ದರಿಂದ ಎಲ್ಲೆಂದರಲ್ಲಿ ಕಾರು ನಿಲ್ಲಿಸುವುದು ಒಳಿತಲ್ಲ
- ರಾಮನಾಥಪುರದ ಅತಿಥಿಗೃಹವು ಬಹಳ ಅನುಕೂಲಕರವಾಗಿದೆ, ಅಲ್ಲದೆ ಅದರ ಬೆಲೆಯೂ ಜೇಬಿಗೆ ಭಾರವಾಗುವುದಿಲ್ಲ.
- ಜಲಪಾತದಲ್ಲಿ ದಯವಿಟ್ಟು ಗಲೀಜು ಮಾಡಬೇಡಿ. ಈಗಾಗಲೇ ನಾವು ಪ್ರಕೃತಿಗೆ ಬಹಳ ಹಾನಿ ಮಾಡಿದ್ದೇವೆ. ಇನ್ನು ಮುಂದಾದರೂ ಎಚ್ಚರಿಕೆಯಿಂದ ಇರೋಣ.
- ಈಗ ಮಲ್ಲಳ್ಳಿಯಲ್ಲಿ ಸರಕಾರವು ಪ್ರವಾಸೀ ಮಂದಿರವನ್ನು ಕಟ್ಟುತ್ತಿದೆ. ಅದರಿಂದ ಇನ್ನು ಮುಂದೆ ಅನುಕೂಲವಾಗಬಹುದು . ಇದಲ್ಲದೆ ಸುತ್ತಲೂ ಹಲವಾರು ಹೋಂಸ್ಟೇಗಳು ತಲೆ ಎತ್ತಿವೆ.
ಏನೇ ಹೇಳಿ. ಒಬ್ಬ ವ್ಯಕ್ತಿಗೆ ತನ್ನ ಮಾತೃಭಾಷೆಯಲ್ಲಿ ವಿವರಿಸುವಾಗ ಸಿಗುವ ಅಭಿವ್ಯಕ್ತಿ ಸ್ವಾತಂತ್ರ್ಯವು ಅನ್ಯ ಭಾಷೆಯಲ್ಲಿ ಸಿಗುವುದಿಲ್ಲ. ಹಾಗೆಯೆ ಮಲ್ಲಳ್ಳಿ ಜಲಪಾತದ ನನ್ನ ಅನುಭವವನ್ನು ತಿಳಿಸಲು ಕನ್ನಡದಲ್ಲಿ ಬರೆಯುವಾಗ ನನಗೆ ಬಹಳ ಆನಂದವಾಯಿತು. ನೀವೂ ಕೂಡ ಇದನ್ನು ಓದಿ ಮೆಚ್ಚಿ ಈ ಜಲಪಾತಕ್ಕೆ ಒಮ್ಮೆ ಭೇಟಿ ಕೊಡಿ. ಹಾಗೆಯೆ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ್ಗಳನ್ನು ತಿಳಿಸಿ. ಏನಾದರು ಮಾಹಿತಿ ಬೇಕಿದ್ದಲ್ಲಿ ಸಂಪರ್ಕ ಮಾಡಿ. ಧನ್ಯವಾದಗಳು.
No comments:
Post a Comment